'ಕರ್ವಾಲೊ', ನನಗೆ ತೇಜಸ್ವಿಯವರನ್ನು ಪರಿಚಯಿಸಿದ ಕೃತಿ, ಸಾಹಿತ್ಯದ ಹುಚ್ಚು ಹಿಡಿಸಿದ ಕೃತಿ, ಹುಡುಕಾಟದ ಬಗ್ಗೆ ಹೇಳತೀರದ ಒಲವು ಬೆಳೆಸಿದ ಕೃತಿ. ಆ ಪರಿಚಯದಂದಿನಿಂದ ತೇಜಸ್ವಿಯವರ ಸಾಹಿತ್ಯ ನನಗೆ ಸಿಹಿ ಕಜ್ಜಾಯ. ಈ ಬ್ಲಾಗಿನ ಶೀರ್ಷಿಕೆಗೂ ಅವರ ಸಾಹಿತ್ಯದಲ್ಲಿನ ಹುಡುಕುವ ಪ್ರಕ್ರಿಯೆಯೇ ಸ್ಪೂರ್ತಿ ಎಂದರೆ ಅತಿಶಯೋಕ್ತಿ ಆಗಲಾರದು. ಸಾಹಿತಿ, ಕೃಷಿಕ, ಛಾಯಾಗ್ರಾಹಕ, ಪ್ರಕೃತಿ ಪ್ರೇಮಿ, ಪಕ್ಷಿ ವೀಕ್ಷಕ - ಹೀಗೆ ಹಲವು ಸಾಮಾಜಿಕ ಸ್ಥರಗಳಲ್ಲಿ ಇದ್ದು ಇಲ್ಲದಹಾಗೆ, ಸರಳ ಜೀವನ ಹಾಗು ನೇರ ನುಡಿಯಿಂದ ಹಲವು ಕನ್ನಡಿಗರ ಹೃನ್ಮನಗಳ ಚೇತನವಾದವರು ತೆಜಸ್ವಿರವರು.
ಅವರ ನೆನಪಿನಲ್ಲಿ, ಅವರದ್ದೇ ಶೈಲಿಯಲ್ಲಿ ಹೇಳುವುದಾದರೆ, 'ನನಗೆ ತೋಚಿದ್ದನ್ನು, ತೋಚಿದಂತೆ ಇಲ್ಲಿ ಬರೆಯುವೆ'. ಶ್ರೀಮತಿ ರಾಜೇಶ್ವರಿ ತೇಜಸ್ವಿಯವರ 'ನನ್ನ ತೇಜಸ್ವಿ' ಕೃತಿಯನ್ನು ನಾನಿನ್ನು ಓದಿಲ್ಲ. ಓದಿ, ಅವರ ಬಗ್ಗೆ ಮತ್ತಷ್ಟು ಬರೆಯಬೇಕೆಂಬ ಆಶಯವಿರುವುದರಿಂದ ಈ ಲೇಖನವನ್ನು ಭಾಗ ೧ ಎಂದು ಕರೆದಿರುವೆ.
ತೇಜಸ್ವಿಯವರು ಕುರಿತು ಎಲ್ಲೋ ಓದಿದ್ದು -
" ಒಂದಿಷ್ಟು ಹಸಿರಿಗೆ
ಒಂದಿಷ್ಟು ಹಕ್ಕಿಗೆ
ನಮ್ಮೊಳಗೆ ಜಾಗ ಕೊಟ್ಟರೆ
ನಮಗೆ ತಿಳಿಯದಂತೆ
ಆ ಭಾವಚಿತ್ರ ಸೆರೆಹಿಡಿಯಲು
ತೇಜಸ್ವಿ ಬಂದೇ ಬರುತ್ತಾರೆ "
ಒಂದಿಷ್ಟು ಹಕ್ಕಿಗೆ
ನಮ್ಮೊಳಗೆ ಜಾಗ ಕೊಟ್ಟರೆ
ನಮಗೆ ತಿಳಿಯದಂತೆ
ಆ ಭಾವಚಿತ್ರ ಸೆರೆಹಿಡಿಯಲು
ತೇಜಸ್ವಿ ಬಂದೇ ಬರುತ್ತಾರೆ "
ತೇಜಸ್ವಿಯವರ ಜೀವನ ತತ್ವವು ಅವರ ಬರವಣಿಗೆಯಲ್ಲಿ ವ್ಯಕ್ತವಾದಂತೆ - "ನಾನು ಅವತಾರ ಪುರುಷನಲ್ಲ. ಕೊನೆಗೆ ಕೈಬೀಸಿ ಮಂತ್ರ ಭಸ್ಮ ತರಿಸುವ ಪವಾಡ ಪುರುಷನೂ ಅಲ್ಲ. ಕೇವಲ ಕಾಮ ಕ್ರೋಧಾದಿ ಅರಿಷಡ್ವರ್ಗಗಳಿಂದ ಪರಿವ್ರುತನಾದ, ಪಂಚೇಂದ್ರಿಯಗಳಿಗೆ ಬದ್ಧನಾದ ಸಾಮಾನ್ಯ ಮಾನವ. ಇಂದ್ರಿಯಾತೀತವೂ ಅಗಮ್ಯವೂ ಆದ ಯಾವ ದರ್ಶನವಾಗಲಿ ಅನುಭವವಾಗಲಿ ಆಗಿಲ್ಲ. ಆಗುವುದೆಂಬ ನಂಬಿಕೆಯೂ ಇಲ್ಲ. ಆದಕಾರಣ ನಾನು ಮೃತ್ಯುವನ್ನು ಜೀವನಾನುಭವದ ಸರ್ವೋಚ್ಚ ಪರಿಮಾಣವೆಂದು ಕರೆವುದು. ನಮ್ಮ ಸರ್ವಾದರ್ಶಗಳೂ ಸರ್ವ ಸೃಷ್ಟಿಯೂ ಸಾವಿನ ಪರಿಮಿತಿಯಲ್ಲಿ."
'ವ್ಯಕ್ತಿವಿಶಿಷ್ಟ ಸಿದ್ಧಾಂತ ಮತ್ತು ಯಮಳ ಪ್ರಶ್ನೆ' ಕೃತಿಯಲ್ಲಿನ ಈ ಅರ್ಪಣೆ ಅವರ ಬಗೆಗಿನ ಹಲವು ವಿಷಯಗಳನ್ನು ತೆರೆದಿಡುತ್ತದೆ - "ಈ ವಿಚಾರ ತರಂಗವನ್ನು, ನನ್ನ ಪ್ರತಿಗಾಮಿತ್ವವನ್ನೆಲ್ಲ ಸಹಿಸಿಕೊಂಡು, ಸುತ್ತಮುತ್ತಿನ ಅಸಹನ, ಅಸಹಿಷ್ಣು, ವೈಷ್ಯಮ್ಯದ ಸ್ಥಿತಿಯಲ್ಲೂ, ನನಗೆ ವಿಶಾಲ ದೃಷ್ಟಿಯ ಲಿಬರಲ್ ವಾತಾವರಣವನ್ನು ಕಲ್ಪಿಸಿಕೊಟ್ಟಿರುವ ಪೂಜ್ಯ ತಂದೆಯವರಿಗೂ, ಕರ್ನಾಟಕದ ವಿವೇಕಿಗಳಿಗೂ, ವಿಚಾರವಂತರಿಗೂ ಅರ್ಪಿಸಲಾಗಿದೆ."
ನನ್ನ ಅಭಿಪ್ರಾಯದಲ್ಲಿ ' ವ್ಯಕ್ತಿವಿಶಿಷ್ಟ ಸಿದ್ಧಾಂತ '(೧೯೬೪) ಲೇಖನವು ತೇಜಸ್ವಿಯವರ ಪ್ರಖರ ಲೇಖನಗಳಲ್ಲಿ ಒಂದು. ಅವರು ನಂಬಿದ್ದ ಸಮಾಜ ಹಾಗು ಜೀವನದ ಪರಿಕಲ್ಪನೆ ಇದರಲ್ಲಿ ಕಾಣಸಿಗುತ್ತದೆ. ಈ ಲೇಖನದ ಮುನ್ನುಡಿಯಲ್ಲಿ ಅವರು ಉಲ್ಲೇಖಿಸಿರುವ ಸಾಲುಗಳು ಇಂತಿವೆ -
“The last end of the state is not to dominate men, nor to resrtain them by fear; rather it is to free each man from fear that he may live and act with full security and without injuiry to himself or his neighbor. The end of the state, I repeat, is not to make rational beings into brute beasts and machines. - Spinoza”
'The tragedy of Hamlet'ನಲ್ಲಿ ಹ್ಯಾಮ್ಲೆಟ್ ನುಡಿವ "There is nothing either good or bad, but thinking makes it so." ಎಂಬ ಮಾತಿಗೂ 'ಕರ್ವಾಲೊ' ಕಾದಂಬರಿಯಲ್ಲಿ ಕರ್ವಾಲೊ ನುಡಿವ "ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ. ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ!" ಎಂಬ ಮಾತಿಗೂ ಅದೆಷ್ಟು ಸಾಮ್ಯ. ಜೀವನವು ನಾವು ಗ್ರಹಿಸಿದ ಹಾಗೆಯೇ ಎಂಬ ನಿತ್ಯ ಸತ್ಯವನ್ನು ಅದ್ಬುತವಾಗಿ ಕಟ್ಟಿ ಕೊಡುತ್ತಾರೆ ತೇಜಸ್ವಿಯವರು.
ಇತ್ತೀಚ್ಚೆಗೆ ಕಂಡುಬರುತ್ತಿರುವ ಆರ್ಥಿಕ ಬೆಳವಣಿಗೆಯ ಹೆಸರಿನಲ್ಲಿನ ಕೃಷಿ ಭೂಮಿಯ ಒತ್ತುವರಿಕೆ ಕಂಡಾಗ ತೇಜಸ್ವಿಯವರು ೧೯೯೧ರಲ್ಲಿ ಬರೆದ ಈ ಸಾಲುಗಳು ಇಂದಿಗೂ ಸಮಂಜಸವಾಗಿವೆ ಎಂದು ಅನಿಸದಿರದು -
"ನಾವಿನ್ನು ಗಾಂಧೀಜಿಯವರ ಸ್ವರಾಜ್ಯ, ವಿಕೇಂದ್ರೀಕರಣ, ಸರಳಜೀವನ ಇತ್ಯಾದಿಗಳ ಹಂಬಲದಲ್ಲೇ ಇದ್ದೇವೆ. ಗ್ಯಾಟ್ ಒಪ್ಪಂದದ ದೂರಗಾಮೀ ಪರಿಣಾಮಗಳನ್ನು ಅವಲೋಕಿಸಿದರೆ ರಾಷ್ಟ್ರೀಯತೆ, ದೇಶಪ್ರೇಮ ಇತ್ಯಾದಿಗಳ ಅರ್ಥ ಅಸ್ಪಷ್ಟವಾಗುತ್ತದೆ. ಆರ್ಥಿಕ ಜಾಗತೀಕರಣದತ್ತ ಧಾವಿಸುತ್ತಿರುವ ನಾಗರೀಕತೆಯಲ್ಲಿ ಸ್ವಾವಲಂಬನೆ ಆರ್ಥಿಕ ಅಪರಾಧದಂತೆ ಕಾಣುತ್ತದೆ. ದಿನವೂ ನೂರಾರು ವಸ್ತುಗಳನ್ನು ಉತ್ಪಾದಿಸಿ ಜಾಹಿರಾತುಗಳ ಮುಖಾಂತರ ಪ್ರಚೋದಿಸುತ್ತಿರುವ ಆಧುನಿಕ ಕೈಗಾರಿಕೆಗಳಿಗೆ ಸರಳ ಜೀವನ ಸೋಂಕು ರೋಗದಂತೆ ಭಯಾನಕವಾಗಿ ಕಾಣುತ್ತದೆ.
ನಾನೇನು ನಿರಾಶಾವಾದಿಯಲ್ಲ. ಆದರೆ ಸುಳ್ಳು ಮಾಹಿತಿಗಳಿಂದ, ಪೊಳ್ಳು ಆಶಾವಾದಗಳಿಂದ ಆಗಲೇ ಸಾಕಷ್ಟು ಜರ್ಜ್ಜರಿತರಾಗಿರುವ ರೈತ ಸಮುದಾಯವನ್ನು ಮತ್ತಷ್ಟು ಮರೀಚಿಕೆಗಳ ಬೆನ್ನು ಹತ್ತುವಂತೆ ಪ್ರಚೋದಿಸುವುದು ತಪ್ಪು. ಕೃಷಿ ಕ್ಷೇತ್ರ ಇಂದು ಭಯಂಕರ ವಿರೋಧಾಭಾಸಗಳ, ಗೊಂದಲಗಳ ಅಲ್ಲೋಲಕಲ್ಲೋಲಗಳಲ್ಲಿ ಸಿಕ್ಕಿಕೊಂಡಿದೆ."
ಸಾಹಿತಿಗೆ ಎಂದೂ ಭಾಷೆ ಹಾಗು ಭೌಗೋಳಿಕ ಎಲ್ಲೆಗಳು ಅನ್ವಯಿಸವು. ಎಲ್ಲೆಗಳ ಆಚೆಗಿನ ವಿಸ್ಮಯ ಲೋಕದಲ್ಲಿ ವಾಸ್ತವದ ತಳಹದಿ ಕಳೆದುಕೊಳ್ಳದೆ ಲೇಖಕ ತನ್ನ ಕರ್ಮಭೂಮಿಯನ್ನು ಕಟ್ಟಿಕೊಳ್ಳುತ್ತಾನೆ. ಅಂತಹ ಕಾರ್ಯಪರತೆ ಕಂಡುಬರುವುದು ತೇಜಸ್ವಿಯವರ ಈ ಸಾಲುಗಳಲ್ಲಿ - "ಘಾರ್ಸಿಯನ 'One Hundred years of Solitude' ಒಮ್ಮೆ ಆಕಸ್ಮಿಕವಾಗಿ ಸಿಕ್ಕಾಗ ಓದುತ್ತಾ ಅನೇಕ ವಿಧಗಳಲ್ಲಿ ಮಲೆಗಳಲ್ಲಿ ಮಧುಮಗಳಿಗೂ ಅದಕ್ಕೂ ಇರುವ ಸಾಮ್ಯ ನೋಡಿ ನಾನು ಬೆಚ್ಚಿ ಬಿದ್ದೆ. ಅಣ್ಣ ಅವನನ್ನು ಓದುವುದಿರಲಿ ಹೆಸರನ್ನೂ ಕೇಳಿರಲಿಲ್ಲ. ಘಾರ್ಸಿಯನ ಕಾದಂಬರಿ ಓದಿದನಂತರ ನಾನು ಆಗಿನ ನಮ್ಮ ಸಾಹಿತ್ಯಿಕ ಸಂದರ್ಭವನ್ನು ಜಾಗತಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ."
ಎಂದೂ ಪೂರ್ವಾಗ್ರಹ ಪೀಡಿತರಾಗದೆ, ಎಲ್ಲ ಬಗೆಯ ಸಾಹಿತ್ಯವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಹಿರಿತನ ತೇಜಸ್ವಿಯವರದ್ದು. ಇದಕ್ಕೆ ಸಾಕ್ಷಿ ಎಂಬಂತಿವೆ ಡೇವಿಡ್ ಹರ್ಬರ್ಟ್ ಲಾರೆನ್ಸ್ ಕುರಿತು ತೆಜಸ್ವಿರವರು ಬರೆದ ಮಾತುಗಳು - " ಲಾರೆನ್ಸ್ ಈ ಶತಮಾನದ ಶ್ರೇಷ್ಠ ದಾರ್ಶನಿಕರಲ್ಲೊಬ್ಬ. ಆತನ ಲೇಡಿಚಾಟರ್ಲಿ ಕಾದಂಬರಿಯನ್ನು ಸರ್ಕಾರ ಮುಟ್ಟುಗೋಲು ಹಾಕಿದಾಗ ಈ ಅತಿಶ್ರೇಷ್ಟ ಚಿಂತಕನಿಗೆ ದೊರೆತದ್ದು ಕುಖ್ಯಾತಿ. ಈ ಯಾಂತ್ರಿಕ ಜಗತ್ತಿನಲ್ಲಿ ಜೀವನವನ್ನು ಜೀವನವನ್ನಾಗೇ ಉಳಿಸಲು, ಸೌಂದರ್ಯದ; ಸೃಷ್ಟಿಶಕ್ತಿಯಾದ ಕಾಮದಸ್ಥಾನ, ಮಹತ್ವಗಳನ್ನು ತಿಳಿಸಲು ಹೆಣಗಿದ ಮಹಾನ್ ವ್ಯಕ್ತಿ ಲಾರೆನ್ಸ್. ಆತನ ಜೀವನದ ಬಗ್ಗೆಯ ಆಸ್ಥೆ; ಕಾಮದ ಬಗ್ಗೆಯ ಆಸ್ಥೆ; ಹಾಗು ಭಗವಂತನ ಬಗ್ಗೆಯ ಆಸ್ಥೆ ಈ ಮೂರು ಒಂದೇ ಮೂಲದಿಂದ ಉದ್ಭವವಾದಂಥವು. ಆದ್ದರಿಂದ ಈತನ ಕಾಮದ ಬಗ್ಗೆಯ ಆಸ್ಥೆಯನು ನಾವು ಇಂದ್ರಿಯಸುಖಲೋಲುಪತೆ ಎಂದೋ, ಕಾಮತಮಸ್ಸು ಎಂದೋ ಅರ್ಥಮಾಡಿಕೊಂಡರೆ ಆತನಿಗೆ ಅಪಚಾರ ಮಾಡಿದಂತೆ ಹಾಗು ಆ ಮೂಲಕ ನಮ್ಮ ಆತ್ಮಕ್ಕೆ ಅಪಚಾರ ಮಾಡಿಕೊಂಡಂತೆ."
'ಲಿಂಗ ಬಂದ' ಕಥಯಿಂದ ಶುರುವಾದ ಇವರ ಪ್ರಯೋಗಶೀಲ ಕಥೆಗಳು ಸೃಷ್ಟಿಸಿದ ಕೌತುಕ ಲೋಕವೇ ನಮ್ಮ ಮುಂದಿದೆ. ಕನ್ನಡ ಸಾರಸ್ವತ ಲೋಕದಲ್ಲಿ ಇಂದಿಗೂ ಒಗಟಿನಂತಿರುವ ಅವರ 'ಮಾಯಾಮೃಗ' ಕಥೆಯನ್ನು ಮರೆಯಲಾದೀತೆ? ದೆವ್ವದ ಅಸ್ತಿತ್ವ ಅಲ್ಲಗೆಳೆಯಲೊರಟ ಇಬ್ಬರು ವಿಚಾರವಾದಿ ಗೆಳೆಯರ ಈ ಕಥೆ ಒಂದು ಗಹನವಾದ ತಾತ್ವಿಕ ಸಂಧಿಗ್ದ ಮಂಡಿಸುತ್ತದೆ. ಈ ಕಥೆಯ ಕುರಿತು ಕೆ.ವಿ.ಅಕ್ಷರ ರವರ ಈ ಮಾತುಗಳು ಉಲ್ಲೇಖಾರ್ಹ - "ದೆವ್ವವು ಇಲ್ಲವೆಂದು ಸಾಬೀತು ಮಾಡುವ ಕ್ರಿಯೆಯೇ ಪರೋಕ್ಷವಾಗಿ ದೆವ್ವವನ್ನು ಸೃಷ್ಟಿ ಮಾಡುತ್ತದೆಯಲ್ಲ ಎಂಬುದು ಈ ಕಥೆಯ ಹಿಂದಿರುವ ವಿಸ್ಮಯವಿಶೇಷ."
ತೇಜಸ್ವಿಯವರು ಇಹಲೋಕ ತ್ಯಜಿಸಿದಾಗ ಓದಿದ್ದು -
"ಗಿಡ ಮರ ಹಕ್ಕಿಗಳಲ್ಲಿ ಜೀವವಿತ್ತ
ಮನುಷ್ಯಾಕಾರ ಇಲ್ಲಿಯವರೆಗೆ
ನಮ್ಮ ಜೊತೆ ಜೊತೆಗೇ ಇದ್ದು
ಮನುಷ್ಯಾವತಾರವೆಂದರೇನೆಂದು
ಪಾಠ ಕಲಿಸಿದ ಅವಧಿ ಮುಗಿದಿದೆ."
"The road is always better than the inn. - Cervantes."
No comments:
Post a Comment