Nov 25, 2011

ಬೇಸಾಯ: ನೀ ಸಾಯ?



"ಯಾರೂ ಅರಿಯದ ನೇಗಿಲ ಯೋಗಿಯೆ ಲೋಕಕೆ ಅನ್ನವನೀಯುವನೋ
  ಹೆಸರನು ಬಯಸದೆ, ಅತಿ ಸುಖಕೆಳಸದೆ, ದುಡಿವನು ಗೌರವಕಾಶಿಸದೆ.
  ನೇಗಿಲ ಕುಲದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ."
                                                           - ಕುವೆಂಪು 


         ವ್ಯವಸಾಯದ ಕುರಿತಾಗಿ ಹತ್ತು ಹಲವು ಆಲೋಚನೆಗಳು ತಲೆ ಹೊಕ್ಕಿ ಕುಳಿತಿದ್ದವು. ಪಿ.ಸಾಯಿನಾಥರವರ 'Everybody loves a good drought' ಪುಸ್ತಕ ಹಾಗು "Nero's Guests" ಸಾಕ್ಷ್ಯಚಿತ್ರ ಇಂದಿನ ಜಾಗತಿಕ ಮಾರುಕಟ್ಟೆ ಮತ್ತು ರಾಜಕೀಯ ವ್ಯವಸ್ಥೆ ಕೃಷಿಯನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬ ಹಸಿ ಸತ್ಯಗಳನ್ನು ಸೂಕ್ಷ್ಮವಾಗಿ ಕಟ್ಟಿ ಕೊಡುತ್ತವೆ ಎಂಬ ನನ್ನ ಅಬಿಪ್ರಾಯವನ್ನು ಗೆಳೆಯನೋರ್ವ ಅಲ್ಲಗಳೆದು ಇವು ತೀರ ಏಕಪಕ್ಷೀಯ ವಾದಗಳೆಂದು ತನ್ನ ಅಬಿಪ್ರಾಯ ಹಂಚಿಕೊಂಡ.  ಹೀಗೆ ಹೊರಟ ನಮ್ಮ ವಿತ್ತಂಡವಾದವನ್ನು  ಕೊನೆಗೊಳಿಸಿದ್ದು 'ಕೆ ವಿ ಅಕ್ಷರ'ರವರ "ವ್ಯವಸಾಯದ ಅವಸಾನ" ಎಂಬ ಲೇಖನ. ಅದರ ಕೊನೆಯ ಕೆಲವು ಸಾಲುಗಳನ್ನು ಓದಿ ನಾವಿಬ್ಬರು ನಿರುತ್ತರರಾದೆವು. ಆ ಸಾಲುಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ - 
  
        ವ್ಯವಸಾಯದ ಅವಸಾನ ಕುರಿತು ನನ್ನ ಚಿಂತಾಲಹರಿಯನ್ನು ಕೆಲವು ದಿನಗಳ ಹಿಂದೆ ನಮ್ಮೂರಿನ ಕೃಷಿಕರೊಬ್ಬರ ಮುಂದೆ ಬಿಚ್ಚಿದೆ. ತುಂಬಾ ಅನುರಕ್ತಿಯಿಂದ ಕೃಷಿ ಕೆಲಸಗಳನ್ನು ಮಾಡುವ ಅವರು ಒಂದೇ ಮಾತಿನಲ್ಲಿ ನನ್ನ ತೀರ್ಮಾನಗಳನೆಲ್ಲಾ ಬುಡಮೇಲು ಮಾಡಿದರು - 'ನಿನ್ನ ವಾದದಲ್ಲೇ ಒಂದು ತೊಂದರೆಯಿದೆ. ಎಲ್ಲ ಸಮಸ್ಯೆಗಳಿಗೂ ಸರ್ಕಾರವೋ ಅಥವಾ ವ್ಯವಸ್ಥೆಯೂ ಕಾರಣವೆಂದು ನೀನು ತಿಳಿದಿದ್ದಿಯ. ಆದರೆ ಸಮಸ್ಯೆ ಇರುವುದು  ಪ್ರತಿಯೊಬ್ಬ ಕೃಷಿಕನ ಮನಸ್ಸಿನಲ್ಲೇ ಹೊರತು ಕೃಷಿಯಲಲ್ಲ . ಕೇವಲ ಲಾಭಕ್ಕಾಗಿ ನಾನು ಕೃಷಿ ಮಾಡುವುದಿಲ್ಲ, ಅದು ನನ್ನ ಬದುಕು ಎಂದು ಯಾರಾದರೊಬ್ಬ ಕೃಷಿಕ ನಿಜವಾಗಿಯೂ ತಿಳಿದಿದ್ದರೆ, ಅಂಥವನು ತನ್ನ ಕೃಷಿ ವಿಧಾನವನ್ನಾದರೂ ಬದಲಾಯಿಸಿಕೊಂಡು ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾನೆ. ಆದರೆ, ಇವತ್ತಿನ ಕಾಲದ ವ್ಯಾಪಾರ ವಹಿವಾಟಿನಂತೆಯೀ  ಕೃಷಿಯು  ರಾಶಿ ರಾಶಿ ಹಣ ತರಬೇಕು ಎಂದು ಭಾವಿಸುವ 'ಮಾನಸಿಕ ಅನಿವಾಸಿ'ಗಳಿಗೆ ಮಾತ್ರ ಇದು ಪರಿಹರಿಸಲಾಗದ ಸಮಸ್ಯೆ!'
      'ಹಾಗಿದ್ದರೆ ಇವತ್ತಿನ ಕೃಷಿ ಬಿಕ್ಕಟ್ಟಿಗೆ ಉತ್ತರ ಕೃಷಿಕರಿಂದಲೇ ಬಂದೀತು ಎಂಬುದು ನಿಮ್ಮ ಊಹೆಯೇ?' - ನಾನು ಕೇಳಿದೆ.
      'ಅದು ಬರಿಯ ಊಹೆಯಲ್ಲ. ನನ್ನ ದೃಡವಾದ ನಂಬಿಕೆ.' - ಎಂದು ಅವರು ಮುಗುಳ್ನಕ್ಕರು.
                                                                                                                - ಕೆ ವಿ ಅಕ್ಷರ

        ಇದು ಮಧ್ಯಮ ಅಥವಾ ಮೇಲು ಧರ್ಜೆಯ ಕೃಷಿಕನಿಗೆ ಅನ್ವಯಿಸುತ್ತದೆ ಆದರೆ ಕೆಳಮಟ್ಟದ, ಸಣ್ಣ-ಪುಟ್ಟ ಕೃಷಿಕನಿಗೆ  (ಆರ್ಥಿಕ ಹಾಗು ವ್ಯವಹಾರಿಕ ಮಾನದಂಡಗಳಲ್ಲಿ) ರಾಶಿ ರಾಶಿ ಹಣ ತರಬೇಕು ಎಂಬ ಮಾನಸಿಕ ಅನಿವಾಸಿತನಕ್ಕಿಂತಲೂ ಮೊದಲು, ದಿನ ನಿತ್ಯದ ಜೀವನ ಸಾಗಬೇಕು ಎಂಬುದೇ ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ "Nero's Guests" ಸಾಕ್ಷ್ಯಚಿತ್ರದಲ್ಲಿನ ಅಳಲು ಹಾಗು ಸಾತ್ವಿಕ ಆಕ್ರೋಶ ಏಕಪಕ್ಷೀಯವಾಗಿರದೆ ಸಮಂಜಸವೂ, ಪ್ರಜ್ಞಾಪೂರ್ವಕವಾಗಿಯೂ ಇದೆ ಎಂಬುದು ನನ್ನ ಅನಿಸಿಕೆ. ಆದರೂ ಅಕ್ಷರರವರ ಕೃಷಿಕ ಮಿತ್ರರ ನಂಬಿಕೆ ನಿಜವಾಗಲಿ ಎಂಬುದೇ ಕೋರಿಕೆ. ಕೃಷಿಯ ಎಲ್ಲಾ ಸ್ತರಗಳಿಗೂ ಅನ್ವಯವಾಗುವ ಉತ್ತರವೊಂದು ರೈತ ಬಂಧುವಿನಿಂದಲೇ ಮೂಡಲಿ. ಪ್ರಜಾತಂತ್ರದಲ್ಲೋ, ಮತ್ತೊಂದು ಹಸಿರು ಕ್ರಾಂತಿಯಲ್ಲೋ - ಇಲ್ಲೇ ಎಲ್ಲೋ ಅರಳಲಿ. ಮಹಾಪ್ರಳಯದವರೆಗೂ ಕಾದು ಕುಳಿಯುವ ನಮ್ಮ ವ್ಯವಧಾನ ಅಳಿಯಲಿ.

"Only the tillers of the soil live by the right. The rest form their train and eat only the bread of dependence."
                                                        - Thiruvalluvar

No comments:

Post a Comment