ಬೆಂಗಾಡು ಬಾಳು
ಬೆನ್ಬಿಡದೆ ಕಾಡ್ವ ಬಾಳ್ಗೀತೆಗಳು,
ಬರಿ ಪ್ರೇತಗಳು
ನೆನಪಿನಂಗಳದಿ ನಿಂತ ಭೂತಗಳು!
ನಾ ಮುಂದು, ತಾ ಮುಂದು
ನುಗ್ಗಿ ಬಂದು, ಮೈಯೇರಿ ಬಿದ್ದು
ಕಳಚಿ ಓಡ ಬಯಸಿದ್ದರೂ
ಬಿಡದೆ ಮನದೊಡಲ ಕಾಡ್ವ ಭೂತಗಳು!
ವಿಷ ಬೀಜಗಳು,
ಹಳೆ ನೆನಪುಗಳು, ಬಾಳ್ಗೀತೆಗಳು.
ಎಂದೋ ಎಲ್ಲಿಯೋ ನಡೆದದ್ದು
ಹಿಂದೆಂದಿನದ್ದೋ, ಇಂದಿನದಲದ್ದು
ಬಿಡಲೊಲದ್ದು, ಬಿಗಿಹಿಡಿದದ್ದು
ಇಂದು ಹಿಂದಿನ ಹಗೆ ಸಾರ್ವ ಭೂತಗಳು!
ಕರಿ ಛಾಯೆಗಳು,
ಕ್ಷುದ್ರ ಚಿಂತನೆಗಳು, ಬಾಳ್ಗೀತೆಗಳು.
ವರ್ತಮಾನಕ್ಕೂ ನಡೆದು ಬಂದು
ನೆಮ್ಮದಿಯ ಬಾಳ್ವೆಗೆ ಭಂಗ ತಂದು
ನರ ನೆತ್ತರು ಹೀರಿ, ಅದರೊಳೆ ಮಿಂದು
ಭೂತದೊಳಗೂತು ಹೋಗಬೇಕಿದ್ದ ಭೂತಗಳು!
ನರಕ ತೋರಣಗಳು,
ಮನ ವರ್ತುಲಗಳು, ಬಾಳ್ಗೀತೆಗಳು.
No comments:
Post a Comment