ಗಿಡದಿ ಕಣ್ಸೋರೆಗೊಂಡಂತೆ ಅರಳಿ,
ಸುಗಂಧ ಬೀರಿ, ಮನ ತಣಿಸಿ,
ದೇವರ ಅಲಂಕಾರದಿ ಸೊಗಸೇರಿಸಿ,
ಅಥವಾ ಸೌಂದರ್ಯಕ್ಕೇ ಪರ್ಯಾಯವೆನಿಸಿ
ಸುಮನೋಹರ ಚೆಲುವೆಯ ಮುಡಿಯೇರಿ
ರಂಗೇರಿಸಿದ್ದು ಮಾತ್ರವೇ ಹೂವಾಗುವುದೇ?
ಕಾಡ್ಮೊಗ್ಗಾಗಿ ಎಲೆಮರೆಯಲಿ ಅವಿತು,
ಮುಂಜಾನೆಯ ಮಂಜ್ಹನಿಯಲಿ ಮಿಂದು,
ಪ್ರಕೃತಿಯ ಬೃಹತ್ ಬ್ರಹ್ಮಾಂಡ ನಾಟಕದಿ
ಕ್ಷಣಮಾತ್ರಕ್ಕೆ ಅರಳಿ ನಗೆ ಬೀರಿ ನಲಿದು
ತನ್ನಂದದಿ ತಾನೇ ತಣಿದು, ಯಾರ
ಕಣ್ನೋಟಕ್ಕೂ ಸಿಗದೆ ಬಾಡಿದ್ದು ಹೂವಾಗದೇ?
ನೀನೊಪ್ಪಿ ನನ್ನ ಮನದಿ ಅಂಕುರಗೊಂಡ
ಭಾವಕ್ಕೆ ಒಪ್ಪಿಗೆಯಿತ್ತು, ಅಪ್ಪುಗೆಯಲ್ಲಿ
ತನು ಸೇರಿ, ಪ್ರೇಮೋನ್ಮಾದವ ಹೀರಿ;
ಸಮಾಜ-ಸಂಸಾರ-ಪರಂಪರೆಯ ಮೂಲಕ
ಸ್ವೀಕೃತವಾಗಿ, ಒಂದೇ ಸೂರಿನಡಿಯಲ್ಲಿ
ಸಾಮಗಾನ ಹಾಡ್ವುದೇ ಪ್ರೀತಿಯಾಗುವುದೇ?
ನಿನ್ನ ಗುಣಲಕ್ಷಣ ಲೋಪದೋಷ ನಡತೆಗಳಿಗೆ
ಪ್ರತಿಕ್ರಿಯೆ ಎಂಬಂತೆ ನನ್ನಲ್ಲಿ ಗೌರವಾಭಿಮಾನಗಳು
ಚಿಗುರೊಡೆದು; ಅಸಮ್ಮತಿಯೂ ಆಗಾಗಲೆದ್ದು,
ಕೋಪ ಕಸಿವಿಸಿಯ ಕಣ್ನೋಟದಲ್ಲೇ ತೊರೆದು-ಸೆಳೆದು,
ಒಡಲಾಟದಿ ಸರಿ-ತಪ್ಪುಗಳ ತೊಳಲಾಟವ ತೊರೆದಿಹ
ಸಮಾಜ ಅನುಮೋದಿಸದ ಭಾವಾಭಿವ್ಯಕ್ತಿ ಪ್ರೀತಿಯಾಗದೇ?
No comments:
Post a Comment