Sep 3, 2017

ಮಂಗ ಸಂಭಾಷಣೆ


ಮರಿ ಮಂಗ: 
ಜಗವು ನೋಡುತಿಹುದಮ್ಮ, 
ನಮ್ಮನು ಜಗವು ನೋಡುತಿಹುದಮ್ಮ. 
ಯಾರು ಏನೆನ್ನುವರೋ ಏನೋ, 
ಕಾಡುತಿದೆ ಸರಿ-ತಪ್ಪುಗಳ ಗುಮ್ಮ.

ಅಮ್ಮ ಮಂಗ:
ಬದುಕ ಸವಿಯೋ ಕಂದಮ್ಮ, 
ಜಗದ ಅನುಮೋದನೆ ಏಕಮ್ಮ? 
ನಿನ್ನ ಕಾರಣಗಳು, ನಿನಗೇ ನೂರಾರು 
ಅವರಿವರಿಗೆ ವಿವರಿಸಲು ಅವರಾರು? 

ಮರಿ ಮಂಗ:
ಸಿಂಗರಿಸಿಕೊಂಡ ಜಗದ ಎದುರು 
ಕೆರೆದುಕೊಳುವ ಬಾಳ್ ನಮ್ಮದೆಂದು 
ತೋರಿ ಹೇಗೆ ಬದುಕಲೇ ಅಮ್ಮ? 
ಕಾಡದೆ ನನ್ನನ್ನು ಕೀಳರಿಮೆಯ ಗುಮ್ಮ? 

ಅಮ್ಮ ಮಂಗ:
ನವೆಯಾದೊಡೆ ಪರಚಿಕೊಳ್ಳುವುದೇ 
ಮಂಗಗಳಾಗಿ ನಮ್ಮ ಬಾಳ್ ನಿಯಮ. 
ಸಿಂಗರಿಸಿಕೊಂಡು ನವೆಯ ಮರೆಮಾಚಲು 
ಅರಿವು - ವಿಶ್ವಾಸಗಳ ಕೊರತೆ ಕಾರಣ. 

ಮರಿ ಮಂಗ:
ಜಗವ ಮೆಚ್ಚಿಸಲು ಓಟದಿ ಜನರ ಜಾತ್ರೆಯು 
ನಾವ್ ಹೀಗೆ ಉಳಿದುಬಿಡುವುದೇ ಅಮ್ಮ? 
ಓಟ ಸೇರಿ ಮೀರಿಸಬೇಡವೇ ಮನುಜ ರಾಶಿಯನು?
ಬೇಡವೇ ನಮಗೂ ಬಿರುದು - ಬಿಗುಮಾನ? 

ಅಮ್ಮ ಮಂಗ:
ಜಗವ ಮೆಚ್ಚಿಸಲು ಕುಣಿಯ ಹೊರಟರೆ 
ನೂರು ಮಂದಿಗೆ ನೂರು ರೀತಿಯ ಮೆಚ್ಚುಗೆ 
ಎಲ್ಲರ ಮೆಚ್ಚುಗೆಗೂ ಕೂಡಿ ಹೆಜ್ಜೆ ಹಾಕಿದರೆ 
ಕುಣಿವ ಸೊಬಗು ಸೋತು ಸಾಯದೇ? 

ಮರಿ ಮಂಗ:
ಎಲ್ಲ ಒಪ್ಪುವೆ, ಆದರೆ ಏಕೀ ಬದುಕ ಬೇನೆ? 
ಹೊಟ್ಟೆಯಾತುರ ತೀರಿಸಲು ರಟ್ಟೆ ಸವೆಯಲೇಬೇಕೆ? 
ನಿನ್ನ ಅಪ್ಪಿ ಹಿಡಿದರೂನೂ ಆತಂಕದಿಂದ 
ದಣಿದು ಸೋತಂತೆ ಬಾಳ್ ಭಾಸವಾಗಿದೆ. 

ಅಮ್ಮ ಮಂಗ:
ಕಲಿತು-ಅರಿತು, ನಲಿದು-ಬೆಂದು, ಬಾಳಲಿ ಮಿಂದು 
ರಟ್ಟೆ ಸವಿಸಿ, ಗಳಿಸಿ ತಿನಲು ಆತ್ಮದಾತುರ ನೀಗುವುದು. 
ನನ್ನ ಅರಿವು, ಅನುಭವ-ಮಮತೆ ಎಲ್ಲ ನಿನಗಿದೆ 
ವಿಶ್ವಾಸಗಳಿಸು, ಸ್ಥೈರ್ಯದಿ ಬದುಕು, ಆತಂಕವೇಕೆ?

No comments:

Post a Comment