Oct 27, 2011

ಮತ್ತೆ ಕಾಡಿತು ಹಣತೆ..


              ಇತ್ತೀಚಿನ ವರ್ಷಗಳಲ್ಲಿ  ಪ್ರತಿ ದೀಪಾವಳಿಯಲ್ಲೂ  ಜಿ ಎಸ್ ಶಿವರುದ್ರಪ್ಪನವರ 'ನನ್ನ ಹಣತೆ' ಕವಿತೆಯ ಸಾಲುಗಳು ಹೃದಯಾಂತರಾಳದಲೆಲ್ಲೋ ಕಾಡುತ್ತಿವೆ ಎಂಬ ಭಾವನೆ. ಸರಿ ಸುಮಾರು ಒಂಬತ್ತು ವರ್ಷಗಳ ಹಿಂದೆ ದೀಪಾವಳಿಯ ಆಸು ಪಾಸಿನಲ್ಲಿ ಈ ಕವಿತೆಯನ್ನು ಮೊದಲ ಬಾರಿ ಓದಿದ್ದು. ಆ ನಂತರ ಪ್ರತಿ ಬಾರಿ ಓದಿದಾಗಲು ಹೊಸ ಹೊಸ ಅರ್ಥ ಹಾಗು ದೃಷ್ಟಿಕೋನ ತೆರೆದಿಡುತ್ತದೆ ಈ ಕವಿತೆ. ಪ್ರಾಯಶಃ ಕವಿತೆಯ ಸೊಬಗಿರುವುದೇ ಅದರ ಕಾಲತೀತತೆಯಲ್ಲೇನೋ! ಕವಿಯು ತನ್ನ ಮಿತಿ ಹಾಗು ವಾಸ್ತವತೆಯ ಅರಿವನ್ನು ಮೊದಲು ಮೂಡಿಸಿ, ನಂತರ ನೈಜತೆಯ ಹಸಿ ಸತ್ಯವನ್ನು ಸೂಕ್ಷ್ಮವಾಗಿ ಕಟ್ಟಿಕೊಡುತ್ತಾ, ಸಾಮಾಜಿಕ ನಿರಾಶಾವದಕ್ಕೆ ಬಲಿಯಾಗದೆ ತನ್ನ ಆಶಾವಾದವನ್ನು, ಜೀವನ ಸೌಂದರ್ಯವನ್ನು ಇಲ್ಲಿ ಕಟ್ಟಿಕೊಡುತ್ತಾರೆ ಎಂಬುದು ನನ್ನ ಅನಿಸಿಕೆ - 

ಹಣತೆ ಹಚ್ಚುತ್ತೇನೆ  ನಾನೂ.
ಈ ಕತ್ತಲನ್ನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ;
ಲೆಕ್ಕವೇ ಇರದ ದೀಪಾವಳಿಯ ಹಡಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು  ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ.

ಹಣತೆ ಹಚ್ಚುತ್ತೇನೆ ನಾನೂ;
ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ
ಆಸೆಯಿಂದಲ್ಲ.
ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿದೆ ಹೆಜ್ಜೆ
ಶತಮಾನದಿಂದಲೂ.
ನಡು ನಡುವೆ ಒಂದಷ್ಟು ಬೆಳಕು ಬೇಕೆಂದು 
ಆಗಾಗ ಕಡ್ಡಿ ಗೀಚಿದ್ದೇವೆ,
ದೀಪ ಮೂಡಿಸಿದ್ದೇವೆ,
ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ 
ಮತಾಪು - ಪಟಾಕಿ - ಸುರುಸುರುಬತ್ತಿ - ಹೂಬಾಣ
ಸುಟ್ಟಿದ್ದೇವೆ. 
'ತಮಸೋಮಾ ಜ್ಯೋತಿರ್ಗಮಯಾ' ಎನ್ನುತ್ತಾ ಬರೀ
ಬೂದಿಯನ್ನೇ ಕೊನೆಗೆ ಕಂಡಿದ್ದೇವೆ.

ನನಗೂ ಗೊತ್ತು, ಈ ಕತ್ತಲೆಗೆ
ಕೊನೆಯಿರದ ಬಾಯಾರಿಕೆ.
ಎಷ್ಟೊಂದು ಬೆಳಕನ್ನು ಇದು ಉಟ್ಟರೂ , ತೊಟ್ಟರೂ
ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು
ಇನ್ನೂ ಬೇಕು ಎನ್ನುವ ಬಯಕೆ.

ಆದರೂ ಹಣತೆ ಹಚ್ಚುತ್ತೇನೆ ನಾನು;
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ
ನಾನು ಯಾರೋ.
               - ಜಿ ಎಸ್ ಶಿವರುದ್ರಪ್ಪ  ('ನನ್ನ ಹಣತೆ')

No comments:

Post a Comment