" मेहरबान हो के बुला लो मुझे, चाहो जिस वक़्त
मैं गया वक़्त नहीं हूँ कि फिर आ भी ना सकूँ "
- ग़ालिब
- ग़ालिब
(ದಯೆ ತೋರಿ ಕರೆದುಕೊ ನನ್ನನ್ನು, ನೀ ಬಯಸಿದ ವೇಳೆ
ನಾನು ಉರುಳಿ ಹೋದ ಸಮಯವಲ್ಲ ಹಿಂದಿರುಗಿ ಬಾರದಿರಲು.)
ಯಾರವಳು? ಯಾರವಳು?
ಎಂದು ಆಡಿಕೊಳ್ವರು ತುಂಟ ಗೆಳಯರು.
ಯಾರವಳು? ಯಾರವಳು?
ಎಂದು ಬೈದು ತೀಡ್ವರು ತಿಳಿದ ಹಿರಿಯರು.
ಹೇಗೆ ಹೇಳಲಿ ಇವರೆಲ್ಲರಿಗೂ ನಾನಿಂದು -
ಅವಳೇ ಇವಳು, ಇವಳೇ ಅವಳು ಎಂದು.
ಚೆಲುವೆಯಾಕೆ ಎಂದರೆ, ಹೆಸರ ಕೇಳ್ವರೇನೆಂದು?
ತಿಳಿಯರು ಚಿನ್ನ, ರನ್ನ ಎನ್ನುತ್ತಿದ್ದೆ ನಾ ನಿನ್ನ ಎಂದು.
ನಮ್ಮ ಮೈತ್ರಿಯ ಸೊಬಗು ಹೆಸರೊಳಿರುವುದೇನು?
ಸೀತಾ, ಗೀತಾ, ಸುಮಿತ್ರೆ, ಶಾರದೆ ಎನ್ನಲಿ ,
ಮೇರಿ, ಜುಲಿಯೇಟ್, ಸೋಫಿಯ, ಸಲ್ಮಾ ಎನ್ನಲಿ,
ನೀನು ನಾಮ ವಿಶೇಷಣಾತೀತವಲ್ಲವೇನು?
ಕಾಡು ಮೇಡಲ್ಲಿ ಗಡ್ಡೆ ಗೆಣಸು ಆಯುವ ಕಸಬುದಾರ ನಾನು,
ವಸಂತದಲ್ಲಿ ಅರಳಿ ನಗೆ ಬೀರುವ ವನಸುಮದಂತೆ ನೀನು.
ಮಲೆ ಮಾರುತಗಳೇರಿ ಮಾಂಸ ಬಗೆಯುವ ಬೇಡ ನಾನು,
ಸುಮದ ಸುಗಂಧ ಗ್ರಹಿಸಲಾರದೆ ಕಾಲ್ಗಸವಾಗಿಸಿದೆ ನಿನ್ನನ್ನು.
ಮುದುಡಿ ಬಾಡಿದ ನಂತರ ಪುಷ್ಪವ ಬೇಡಿ ಬಯಸಿದರೇನು?
ಮರಳಿ ಅರಳಿ ಆ ನಗೆಯ ಅದು ಬೀರ ಬಲ್ಲದೇನು?
ಕ್ಷಮೆ ಕೋರಿ, ನಿನ್ನ ಓಲೈಸಿ ಮತ್ತೆ ಆಗುತ್ತಿದ್ದೆ ನಾ ಪರವಶ -
ಅಷ್ಟರಲ್ಲಿ ಘೋರ ಶಿಕ್ಷೆ ಹೇರಿ ನನಗೆ, ನೀನಾದೆ ವಿಧಿವಶ.
ಕ್ಷುಬ್ಧ ಮೌನದಿ ಕ್ಷಿತಿಜದಾಚೆಗೆ ಹರಿಯುತಿರುವ ನನ್ನ ಕಣ್ಣೋಟ,
ಅಸಾಧ್ಯವೆಂದು ತಿಳಿದೂ ನಿನ್ನ ಬರುವಿಕೆ ಕಾಯಿಸುವ ವಿಧಿಯಾಟ.
ಭೂವ್ಯೋಮ, ಅನಂತ ಮಜಲುಗಳ ಮಾರ್ಜಾಲಗಳನು ದಾಟಿ,
ಮತ್ತೆ ನನ್ನೆಡೆಗೆ ಮಸುಕು ಮೌನದಿ ಮರಳಿ ಬರುವೆಯಾ ಗೆಳತಿ?
No comments:
Post a Comment