Dec 18, 2011

ನನಗೆ ನಾನ್ ಯಾವನು?


ಯಾರು? ನಾನ್ಯಾರು? ನನಗೆ ನಾನ್ಯಾರು?
ಹಲವರಿಗೆ ಹಲವು ಬಗೆ ಕಾಣುವ ನಾನ್ಯಾರು?
ಅವರವರ ದೃಷ್ಟಿ, ಸೃಷ್ಟಿಗೆ ಸಿಕ್ಕವನು.
ನನಗೆ ನಾನ್ ಯಾವನು?

ಹೆತ್ತ ಅಮ್ಮನಿಗೆ ಮುದ್ದು ಕಂದನು.
ಬಿತ್ತಿ ಭೂತಾಯಿಯ ಉಳುವ ರೈತನು.
ಸತ್ತ ಮರುಕ್ಷಣದಿ ಕಸ ಸಮಾನನು!
ನನಗೆ ನಾನ್ ಯಾವನು?

ಇವಳ ಇನಿಯನು, ಅವನ ಗೆಳೆಯನು.
ಇಲ್ಲಿ ಮಾಲಿಕನು, ಅಲ್ಲಿ ಕಾರ್ಮಿಕನು.
ಇಂದು ಶಿಷ್ಯನು, ಅಂದು  ಶಿಕ್ಷಕನು.
ನನಗೆ ನಾನ್ ಯಾವನು?

ಹಿರಿಯರಿಗೆ ಪ್ರಾಯದ ಹುಡುಗನು.
ಕಿರಿಯರಿಗೆ ಪ್ರಚಂಡ ಪ್ರತಾಪನು.
ಸಮವಯಸ್ಕರಿಗೆ ಪ್ರತಿಸ್ಪರ್ಧಿಯಾದೆನು.
ನನಗೆ ನಾನ್ ಯಾವನು?

ಪಂಚೇಂದ್ರಿಯ ಪ್ರಲೋಭ ಪ್ರಕ್ಶುಬ್ಧನೋ?
ಅನಂತ ಅಪರಿಮಿತ ಅಪ್ರಾಪ್ತನೋ?
ದ್ವಂದ್ವಾತೀತ ಧ್ಯಾನ ಧರ್ಮಜನೋ?
ನನಗೆ ನಾನ್ ಯಾವನು?

ಭೂ ಬ್ರಹ್ಮನೋ? ವ್ಯಾಕುಲ ವ್ಯಸನಿಯೋ?
ಬೆತ್ತಲ ಬೆಳಕೋ? ಕತ್ತಲ ಕರಿಛಾಯೆಯೋ?
ಸಾಧಕನೋ? ಭಾದಕನೋ? ಸಮಗ್ರನೋ?
ನನಗೆ ನಾನ್ ಯಾವನು?

ನಿರಾಕಾರ ನಿರಾಧಾರ ನಿಶಾಚರನೋ?
ನಿರ್ವಿವಾದ ಯಮ ಕಿಂಕರನೋ?
ಸ್ವಾರ್ಥ, ಧೂರ್ತ ಪರಮ ದುಷ್ಟನೋ?
ಸರ್ವ ಶಾಂತ ಮೌನ ಸಂತನೋ?
ನನಗೆ ನಾನ್ ಯಾವನು?
ನನಗೆ ನಾನ್ ಯಾವನು? 

No comments:

Post a Comment