ಚಿತ್ರ ಕೃಪೆ: ethiohealthcare.wordpress.com |
ಇನ್ನೂ ಕನಿಷ್ಠ ಇಪ್ಪತ್ತು ವಸಂತಗಳನ್ನೂ ಕಂಡಿರದ ಎಳೆ ವಯಸ್ಸು, ಆದರೆ ಎದೆಯಾಳದ ನೋವಿಗೆ ವಯಸ್ಸಿನ ಕಿರಿತನದ ಬಗ್ಗೆ ಕರುಣೆ, ಅನುಕಂಪಗಳು ಎಲ್ಲಿನವು? ಜಿಗಿದೋಡುವ, ಪುಟಿದೇಳುವ ಉಲ್ಲಾಸದ ಚಿಲುಮೆಯಂತಿರುವ ಯೌವನದಲ್ಲಿ ಈ ತಾಯಿಯ ಮೂಕವೇದನೆ ಅದೇಕೊ ಮನವ ಬಾಧಿಸುತಿತ್ತು. ಜೀವನದ ಕಹಿಸತ್ಯಗಳ ಸೈರಿಸಿ, ನೂವ್ನಲಿವುಗಳ ಅನುಭವಿಸಿಯೇ ತೀರಬೇಕೆನ್ನುವ ಬಾಳನಿಯಮವ ಆಕೆಗೆ ಸಂತೈಸಿ ತಿಳಿದು ಹೇಳಬಲ್ಲ ಆ ಧೀಶಕ್ತಿ ಕಾಲಗರ್ಭದಿ ಎಲ್ಲಿಹುದೋ? ಹೆಣ್ಹೆಗಲಿಗೆ ಎಳೆವಯಸ್ಸಿನಲ್ಲೇ ಪ್ರಕೃತಿ ಕಟ್ಟಿದ ಋಣಭಾರವ ಕಂಡು ಸೃಷ್ಟಿಯ ಸಮ್ಯಕ್ ನ್ಯಾಯವದೆಲ್ಲಿ ಎಂಬ ಪ್ರಶ್ನೆ ಕಾಡುತ್ತಿತ್ತು. "ಸರಿಯೋ ಕಾಲದ ಜೊತೆಗೆ, ವ್ಯಸನ ನಡೆವುದು ಹೊರಗೆ" ಎಂಬಂತೆ ಕಾಲಚಕ್ರ ಉರುಳುತ್ತಾ ಈಕೆಯೂ ಸಮಾಧಾನಗೊಳ್ವಳು, ಅಲ್ಲಿಯವರೆಗೆ ಈ ಭಾವಬೇನೆಯ ಸರಪಳಿ ಇನ್ನಷ್ಟು ಬಾಧಿಸುವುದು. ಇದೇ ಏನು ಪ್ರಕೃತಿಯ ಕಾಲಾತೀತ ನ್ಯಾಯಕ್ರಮ!?
ಎಲುಬಿಲ್ಲದ ನಾಲಗೆ ವಟಗುಟ್ಟುವಂತೆ ಎಡೆಯಿಲ್ಲದ ಆಲೋಚನೆಗಳು ಓಡುತ್ತಿರಲು ನನ್ನ ಪ್ರಶ್ನೆಗಳಿಗೆ ಪ್ರಕೃತಿ ಉತ್ತರಿಸಬಯಸಿದಂತೆ, ಆಕೆಯ ಹಸುಗೂಸು ಅಳಲಾರಂಭಿಸಿತು. ತನ್ನ ಮುದ್ದಿಸೋ ದೈವವೇ ಅಳುವಾಗ, ಕಂದನು ತಾನು ಕೈಸೋತು ಕೂರುವುದು ಹೇಗೆ ಎಂಬಂತೆ, ಅಮ್ಮನ ನೂರ್ನೋವುಗಳನ್ನೂ ತಾನೇ ನೀಗಿಸಲು ಪಣತೊಟ್ಟಂತೆ ಮಗುವದು ಚೀರಾಡಲು ಭಾವಾವೇಶದ ಹಲವು ಕಡಲ್ಗಳನು ದಾಟಿ, ಮನಸಿನುದ್ವೇಗದ ಶಿಖರ ಶೃಂಗಗಳನ್ನಿಳಿದು ತಾಯಿ ತನ್ನ ಮಗುವ ಸಂತೈಸಲು ತೊಡಗಿದಳು. ಮಗುವೊಡನೆ ಮಗುವಾಗಿ ತಾಯಿಯು ಅಳುವ ಕಂದನನ್ನು ಸಮಾಧಾನಗೊಳಿಸುತ್ತಿದ್ದಳೊ ಅಥವಾ ಕಂದನು ಅಳುವ ನೆಪದಿ ತಾಯಿಯ ಎದೆಯಾಳದ ಆಕ್ರಂದನವ ಕ್ಷಣಮಾತ್ರದಿ ಅಳಿಸಿ ಅವಳನ್ನು ತನ್ನದೇ ರೀತಿಯಲ್ಲಿ ಸಮಾಧಾನಗೊಳಿಸುತಿತ್ತೋ ನಾನರಿಯೆ. ತಾಯಿಯ ಅನಂತ ಮನೋವೇದನೆಗಳು ಮಗುವಿನ ಆ ಸಣ್ಣ ಅಳುವಿನೆದುರು-ನಗುವಿನೆದುರು ಶೂನ್ಯವಾಗುವ ಸೃಷ್ಟಿಯ ಈ ಸಮೀಕರಣಕ್ಕೆ ಸಾಟಿಯೇನಾದರೂ ಇದೆಯೇನು?
No comments:
Post a Comment