Sep 1, 2016

ಸ್ವಾತಂತ್ರ್ಯದ ಸಂಭ್ರಮಾಚರಣೆ!

PC: Myself!


ये दाग़ दाग़ उजाला, ये शबगज़ीदा सहर
वो इन्तज़ार था जिस का, ये वो सहर तो नहीं
- ಫೈಜ್ ಅಹ್ಮದ್ 'ಫೈಜ್' ('ಆಗಸ್ಟ್ 1947' ಎಂಬ ಕವಿತೆಯಲ್ಲಿ) 
(ಈ ಕಲೆ ಕಲೆಕಟ್ಟಿದ ಬೆಳಕು, ಈ ಇರುಳು ನುಂಗಿದಂತಿಹ ಮುಂಜಾನೆ 
ಯಾವುದರ ನಿರೀಕ್ಷೆಯಲ್ಲಿ ಕಾದಿದ್ದೆವೋ, ಇದು ಆ ಬೆಳಗಂತೂ ಅಲ್ಲ)

ಆಚರಣೆಯಂತೆ
ಸಂಭ್ರಮಾಚರಣೆಯಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ರಸ್ತೆ ತಡೆಯಂತೆ,
ಏಕೆಂದರೆ ಮೆರವಣಿಗೆಯಂತೆ. 
ಹೆರಿಗೆ ಬೇನೆಯ ತಾಯಿಯೂ 
ನೋವು ತಡೆದು ಕಾಯಬೇಕಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ಗಾಂಧಿಯ ಪುತ್ಥಳಿಯಂತೆ 
ಅದಕೆ ಜರಿಯ ಶಾಲು ಹೊದಿಸಬೇಕಂತೆ 
ಶಾಲಿನ ಅಂಚು ಹಸಿರೋ ಕೇಸರಿಯೋ 
ಎಂಬುದೇ ಒಂದು ಕಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ನೆಹರು, ಸುಭಾಷರಂತೆ 
ಅವರನು ಕೊಂಡಾಡುವ ಇತಿಹಾಸವಂತೆ 
ಆದರ್ಶಗಳ ಆರಾಧಿಸುವ ಕುರುಡುಕೂಪ 
ಇಲ್ಲಿ ವಿಮರ್ಶೆಗೆ ಜಾಗವಿಲ್ಲವಂತೆ 
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

ಇತಿಹಾಸದ 'ಪರಿಶುದ್ಧ' ಪಾಠವಂತೆ
ಫೇಸ್ಬುಕ್ಕಿನಲ್ಲಿ ಪರ್ಯಾಯ ಪೋಸ್ಟ್ಗಳಂತೆ
ರಾಷ್ಟ್ರಧ್ವಜವ ವಾಟ್ಸಾಪ್ಪಿನಲ್ಲಿ
'ಡಿಪಿ' ಮಾಡುವುದೇ ರಾಷ್ಟ್ರಪ್ರೇಮವಂತೆ
ಸ್ವಾತಂತ್ರ್ಯದ ಸಂಭ್ರಮಾಚರಣೆಯಂತೆ!

No comments:

Post a Comment