ಕತ್ತಲೆಗೆ....
ಕಡು ಕತ್ತಲೆಗೆ.....
ವಿವಿಧ ಛಾಯೆಯ ಕಡು ಕತ್ತಲೆಗೆ....
ಮಳೆ ಕಾಣದೆ ಒಣಗಿದ ಹಳ್ಳಿ ಬದಿಯ ಮಣ್ ರಸ್ತೆಗಳಲಿ
ಧೂಳೇರಿ ಕಣ್ಮುಚ್ಚಿದಾಗ ಆವರಿಸುವ ಅವಕಾಶ ಕೊರತೆಯ ಕತ್ತಲೆಗೆ.
ವಲಸೆ ಹೊರಟ ಮಗನ ಬೆನ್ನ ಹಿಂದೆ ಎದೆ ಭಾರದಿ ಕುಸಿದು,
ಕಂಬನಿ ಇಡುವ ಅವ್ವಂದಿರ ಕಣ್ ಮಂಜಾಗಿಸುವ ಕತ್ತಲೆಗೆ.
ಏಕಾಂತ ಇರುಳುಗಳ, ಭವ್ಯ ಸ್ವಪ್ನಗಳ ನಶೆಭರಿತ ಕತ್ತಲೆಗೆ.
ಮೊದಲ ಪ್ರೇಮದ ಮೊದಲ ಸ್ಪರ್ಶದ ಅಮಲಲಿ ಕೌಮಾರ್ಯವು
ಹಗಲಿನ ನಾಚಿಕೆ ಹೂತಿಟ್ಟು ತನ್ನಳಿವನು ಬಯಸುವಾಗಿನ ಕತ್ತಲೆಗೆ,
ಭಾವ ರಾಗ ಉದ್ವೇಗ ತಳಮಳಗಳನ್ನೆಲ್ಲಾ ಬಿಗಿದಪ್ಪುವ ಕತ್ತಲೆಗೆ.
ಜ್ಞಾನ ವಿವೇಕಗಳ ಮೇರುಕೇಂದ್ರಗಳಲ್ಲಿನ ಆಲೋಚನೆಯ ಅಭಾವದಿ
ಜಾತಿ ಪಜೀತಿ ಕಲಹ ರಾಜಕಾರಣಗಳ ಅಂಧಾನುಕರಣೆಯ ಕತ್ತಲೆಗೆ.
ಪ್ರಗತಿಯ ಹರಿಕಾರರು, ಕವಿಗಳು-ಕಲಿತವರು ಸೈದ್ಧಾಂತಿಕ ನೆಲೆಯಲ್ಲಿ
ಪ್ರಜ್ವಲ ರಾಮರಾಜ್ಯದ ಹುಸಿ ಕನಸ ತೋರಿಸಿ ಮಸಿ ಬಳೆವ ಕತ್ತಲೆಗೆ.
ಒಂಟಿ ಕಣಿವೆಗಳ, ಕಾಡುವ, ಬೆಕೋ ಎನ್ನುವ ಕತ್ತಲೆಗೆ.
ಕಾಲದ ಕ್ರೌರ್ಯದಿ ವಿಧವೆಯಾರಾದ ಹೆಣ್ಮಕ್ಕಳು ಮೌನದಿ
ಭಾವನಿವೇದನೆಗೈಯಲು ಸಾವಕಾಶದಿ ಕೇಳುವ ಕತ್ತಲೆಗೆ,
ಸತ್ತವರ ಸಾವಿಗೆ ಎಂದೂ ಬದುಕಿಹರ ದೂಡದ ಕತ್ತಲೆಗೆ.
ನಾಗರೀಕ ನಗರ ಪಟ್ಟಣಗಳ ಭೂಗತ ಅಗೋಚರ ಪಶು ಪ್ರವೃತ್ತಿ
ತನ್ನೊಡನೆ ನಕ್ಕವರ ನಗೆ ಕಸಿದು ಮಾನುಷ ಭರವಸೆ ಕೊಲ್ಲುವ ಕತ್ತಲೆಗೆ.
ಅನಾಮಿಕ ಅಪರಿಚಿತರನ್ನು ಆಪತ್ಭಾಂದವರನ್ನಾಗಿಸುವ ಕತ್ತಲೆಗೆ.
ಕಳ್ಳ ಕಿಡಿಗೇಡಿಗಳ ಮೆರೆಸಿ ಗೌರವಿಸುವ ಸುವ್ಯವಸ್ಥಿತ ಕತ್ತಲೆಗೆ.
ಸುಧಾರಣೆಗಳ ಸುಸ್ತು ಪ್ರಗತಿಯಡಿಯಲಿ ನಿರುತ್ಸಾಹಗೊಂಡು
ಆದರ್ಶವಾದಿಗಳು ಆದರ್ಶಗಳ ಔಚಿತ್ಯವನ್ನೇ ಪ್ರಶ್ನಿಸುವ ಕತ್ತಲೆಗೆ.
ಪರೀಕ್ಷಿಸದೆಯೇ, ಪರಾಮರ್ಶಿಸದೆಯೇ ಎಲ್ಲವ ಪ್ರಮಾಣಿಸುವ
ನಮ್ಮೊಡಲಿನ, ನಮ್ಮಾಲೋಚನೆಗಳ, ನಮ್ಮಾತ್ಮಗಳ ಕತ್ತಲೆಗೆ.
No comments:
Post a Comment