Jan 23, 2017

ಬಾಳು: ಆಕಸ್ಮಿಕಗಳ ಒಟ್ಟು ಮೊತ್ತ

Picture courtesy: Myself!
 
ಯಾವ ವಯಸ್ಸಿನಲ್ಲಿ ಏನೋ, ಯಾರೂ ಅರಿಯೆವು
ಆದರೆ ವಯಸ್ಸಂತೂ ಕಡು ಖಚಿತ ಕಾಲನ ಬೇಡಿಗಳು.

"If our heart were large enough to love life in all its detail, we could see that every instant is at once a giver and a plunderer." 
- Gaston Bachelard

ನಾವು ಭಾವಿಸಿದಂತೆ ನಮ್ ನಾವಿಕರು,
ತೇಲಿ ಹೊರಟ ಹಡಗಿನಂತೆ ನಮ್ ಬಾಳು.
ಎಲ್ಲಿ ಕಾದಿಹವೋ ಯಾರೂ ತಿಳಿಯರು
ಸುಳಿ ಗಾಳಿ ಮಳೆ ಪ್ರಚಂಡ ಪ್ರಪಾತಗಳು.

ಅನಿಶ್ಚಿತತೆಯೇ ಮೈವೆತ್ತಿ ಹರಡಿದಂತೆ ಕಡಲು
ನಿಶ್ಚಿತ ಆ ವೈಶಾಲ್ಯವ ಒಳಗೊಂಡ ದಡಗಳು.
ಯಾವ ವಯಸ್ಸಿನಲ್ಲಿ ಏನೋ, ಯಾರೂ ಅರಿಯೆವು
ಆದರೆ ವಯಸ್ಸಂತೂ ಕಡು ಖಚಿತ ಕಾಲನ ಬೇಡಿಗಳು.

ಸೀಮಿತ ಅನುಭವಗಳು, ಎಷ್ಟೆಷ್ಟೋ ಭ್ರಮೆಗಳು,
ಸರಿ-ತಪ್ಪು ಎಂಬ ನಿಖರ ನಿರ್ದಿಷ್ಟ ಪರಿಕಲ್ಪನೆಗಳು. 
ಅನುಭವ ಕಲಿಸುವ ಪಾಠಗಳು, ಬಾಳ ಪೆಟ್ಟುಗಳು,
ದೇಶ-ಕಾಲ-ಸಂಸ್ಕೃತಿ-ಸಮಾಜಗಳ ಸಾಪೇಕ್ಷ ಸತ್ಯಗಳು.

ಮನ ತೆರೆದಷ್ಟೂ ತೆರೆದುಕೊಳ್ಳುವ ಬ್ರಹ್ಮಾಂಡ ನಾಟಕವು 
ಅಚ್ಚರಿ-ಆತಂಕ-ಆನಂದ ಬಂದು ಅಪ್ಪಳಿಸುವ ಅಲೆಗಳು. 
ಸಂದಿಗ್ಧತೆ-ಸಂಭವನೀಯತೆಗಳ ನಡುವೆ ಈ ಪಯಣವು,
ಎಷ್ಟು ಆಕಸ್ಮಿಕಗಳ ಒಟ್ಟು ಮೊತ್ತವೋ ನಮ್ ಬಾಳು!

No comments:

Post a Comment