(ಈ ಕವಿತೆ,
ಗೆಳತಿಯ ಗೆಳತಿಯ ಗೆಳತಿಗೆ -
ಸಾವನು ಜಯಿಸಿದ ಆಕೆಯ ಬಾಳೊಲ್ಮೆಗೆ !!)
ನಾನು ಬಾಲೆ,
ಸಬಲೆ ಅಬಲೆಯರ
ಬಲೆಗೆ ಬಲಿಯಾಗ
ಬಯಸದ ಬಾಲೆ.
ಕಿತ್ತು, ಕಡಿವ
ಕ್ರೌರ್ಯದಾಚೆ
ನೀರೆರೆದು, ನೆಳಲೀವ
ನೆರವಿನಾಚೆ
ವನವಾಸಿಯಂತೆ
ವನಸುಮದ ತೆರದಿ
ಕಾಡುಮೊಗ್ಗಾಗಿ,
ಅರಳಿ ಹೂವಾಗಿ,
ಬಾಡಿ, ಮುದುಡಿ,
ಬಾಳ್ಸಂಭ್ರಮದಿ
ಮಿಂದೋಡುವೆನು;
ನನ್ನ ಸರಿಸರದಿ ನನಗಿರಲು,
ನನ್ನ ಪಾಡಿಗೆ ನಾನು.
ನಾನು ಬಾಲೆ,
ಸಬಲೆ ಅಬಲೆಯರ
ಬಲೆಗೆ ಬಲಿಯಾಗ
ಬಯಸದ ಬಾಲೆ.
No comments:
Post a Comment